ತೊಳಲಾಟ,
ಹೊರಳಾಟ.
ಕೆರಳಿದ ಒಲವಿನ
ಕೂಗಿಗೆ..
ತರ್ಕಕ್ಕೆ ಸಿಗದ
ಸೆಣಸಾಟ.
ತೇಲಾಟ,
ತೂಗಾಟ.
ಹರೆಯ ಅಬ್ಬರಕ್ಕೆ
ತತ್ತರಿಸಿ.
ಹಾರ್ಮೋನುಗಳ
ರಂಪಾಟ.
ನೂಕಾಟ,
ಪೀಕಲಾಟ.
ಜಿಗುಟಿನ ಈ
ಒಗಟು ಬಿಡಿಸಲು,
ಇಂದ್ರೀಯಗಳ
ದೊಂಬರಾಟ.
ದೂರದ ಊರಲ್ಲಿ
ಯಾರದೋ ಒಂದು
ನೋಟ ಕದ್ದ ಭಾಸ.
ಯಾವದೋ ಕಥೆಯ
ಕೊನೆಯ ಅಧ್ಯಾಯದ
ಮರೆತ ಗದ್ಯವಾದ ಭಾಸ.
..
ಮಾತುಗಳ ಬತ್ತಿದ
ಮರುಭೂಮಿಯಲಿ,
ಮೌನ ಬಿತ್ತಿದ ಭಾಸ.
ಮುಖಗಳೇ ಇಲ್ಲದ
ಜಾತ್ರೆಯಲಿ,
ಮುಖವಾಡವಾದ ಭಾಸ.
..
ಭಾವನೆಗಳ ಮರೆತ
ಬದುಕಿನಲಿ,
ಉದ್ವೇಗ ನೆಟ್ಟ ಭಾಸ.
ಪಾತ್ರಗಳೇ ಇಲ್ಲದ
ಕಪಟ ನಾಟಕದ,
ನಿರೂಪಕನಾದ ಭಾಸ.
..
ಏನೋ ಪಡೆಯಲು
ಓಡಿ ಹೋಗಿ, ಸಿಗದೇ
ಸೋತು ನಿಂತ ಭಾಸ.
ಗಮ್ಯವೇ ಇಹದ
ಪಯಣದಲಿ.
ಮನೆ ಹುಡುಕುತ,
ನನ್ನಲಿ ನಾನೇ..
ಅಲೆಮಾರಿಯಾದ ಭಾಸ.
..