Showing posts with label Kannada. Show all posts
Showing posts with label Kannada. Show all posts

23 May 2023

ಖಾಲಿತನ

ಕೆರೆಯ ಅಛಲ
ಸ್ಥಿರತೆಯ ಮೇಲೆ,
ಖಾಲಿತನದ ಮಂಕು 
ನಿರ್ವಾತ.

ಇಲ್ಲಿ ಪಕ್ಷಿಗಳು
ಹಾರುವಂತಿಲ್ಲ.
ಕಲ್ಲುಗಳು ಬೀಳುವಂತಿಲ್ಲ.
ಹಾಡುಗಳಿಗಿಲ್ಲಿ,
ಉಳಿಗಾಲವಿಲ್ಲ.

ಖಾಲಿ ಹಾಳೆಯ
ಬಿಳಿ ಇದಲ್ಲ.
ಬರೆಯುವುದು,
ಚಿತ್ರ ಬಿಡಿಸುವುದು,
ಇಲ್ಲಿ ಸಾಧ್ಯವಿಲ್ಲ.

ತನ್ನ  ಮೇಲೆ 
ತಾನೇ ಏರಿ,
ಬಿಗಿತವ ಹೆಚ್ಚಿಸಿ,
ಇದು ವಾಸ್ತವತೆಯ
ತಿನ್ನುತ್ತದೆ. 
ಬಹಳ ಸಲ
ಬಣ್ಣಗಳಿಲ್ಲಿ ಬಂದು 
ಸಾಯುತ್ತವೆ.

ಕೆಲವೊಮ್ಮೆ ಇದು
ಕತ್ತಲಾಗಿ ಕವಿದರೆ.
ಮತ್ತೊಮ್ಮೆ ನೀಳ
ನೀರವತೆಯಾಗಿ
ಹಬ್ಬುತ್ತದೆ.

ಅಸ್ತಿತ್ವವನ್ನೇ
ಕಬಳಿಸುವ ಮರೆವು 
ಒಮ್ಮೊಮ್ಮೆ. 
ಕುರುಡಾಗಿಸುವ
ಬೆಳಕಾಗುವುದಿದು 
ಇನ್ನೊಮ್ಮೆ.

ನಿದ್ದೆ ಬರದ ಆ
ಸತ್ತ ರಾತ್ರಿಗಳಂದು,
ಮಾತಿಲ್ಲದೆ,
ಹಾಸಿಗೆಯ ಮೇಲೆ
ಅತ್ತಿಂದಿತ್ತ ಹೆಣವಾಗಿ
ಹೊರಳಾಡಿ,
ನಾನೂ, ನೀನೂ, 
ಸೋತು ಶರಣಾದಾಗ,

ಖಾಲಿತನದ 
ಈ ಶೂನ್ಯತೆಯ,
ಆಕರವಾಗುತ್ತೇವೆ.

02 March 2023

ಕೃತಿ

ದೂರದಲ್ಲೆಲ್ಲೋ,
ಒಂದು ಕಥೆ, ನಿನ್ನ 
ಆಸರೆ ಬಯಸಿದೆ.

ಕವನವೊಂದು,
ನಿನ್ನ ಶಬ್ದಗಳ‌ ಲಯದಿ 
ಕುಣಿಯಲು ಹಂಬಲಿಸಿದೆ.

ಚಿತ್ರವೊಂದು, ನಿನ್ನ 
ಕುಂಚದ ಸ್ಪರ್ಶದಿ
ಮೂಡಲಿಚ್ಚಯಿಸಿದರೆ..

ಕನಸೊಂದು,‌‌ ನಿನ್ನ,
ಕಣ್ಣಡಿ ನನಸಾಗ‌ಲು
ಕಾಯುತಿದೆ.

ನೀನೆಷ್ಟೇ, ನೀರಸ,
ಎಷ್ಟೇ ಮುಗ್ದನಿದ್ದರೂ.
ನೀನು..ನಿನ್ನಲ್ಲಿಯೇ..

ಒಂದು, ಬರೆಯಲಾಗದ,
ಬಿಡಿಸಲಾಗದ ಕಲೆ.
ಕೆತ್ತಲಾರದ ಮೂರ್ತಿ.

ಆ ಭಗವಂತನ
ಅನನ್ಯ ಕೃತಿ.

01 March 2023

ಶುಭ ದಿನ

ತನ್ನ ಬೇಗೆಯಲ್ಲಿ 
ತಾನೇ ಬೆಂದೆನೆಂಬ 
ಹೆದರಿಕೆ ಬೆಂಕಿಗೆ.
ಬೂದಿ ಆಗಬಹುದಿದ್ದ,
ಗುಡಿಸಲೆಲ್ಲ ಉಳಿದಿವೆ.

ನೆಲದಲ್ಲಿ ಕಳೆದೆನೆಂಬ
ಕಳವಳ ನುಗ್ಗುವ 
ನೀರಿಗೆ.‌ ಈ ಸಲ 
ಫಸಲು‌ ಕೈಗೆ‌ ಸಿಕ್ಕಿದೆ.

ಬಿರುಗಾಳಿಗೂ
ಇವತ್ತೇಕೋ ಆಯಾಸ.
ದೋಣಿಗಳು ದಡ
ಸೇರಿವೆ, ನಾವಿಕರಿಗೆ,
ತೆಲೆನೋವು ತಪ್ಪಿದೆ.

ಇವತ್ತು, ಸೂರ್ಯ 
ಯಾವ ದಿಕ್ಕಿನಲ್ಲಿ 
ಹುಟ್ಟಿದ್ದಾನೋ..

ಹೂವು ಅಂದವಾಗಿ 
ಅರಳಿವೆ.
ದಿನವೂ ಸಲೀಸಾಗಿ
ಸಾಗಿದೆ.

ವಿಧಿಯು ಕಲ್ಲೆಡವಿ
ಬಿದ್ದಿದೆ,
ಜಗವು ಕಿಲಕಿಲನೆ
ನಗುತಿದೆ.

25 February 2023

ಹಸಿವು

ಗಿಡ ಮರ ಗುಡ್ಡಗಳ
ಸುಟ್ಟು ತಿನ್ನಬಲ್ಲ 
ಆ ಬೆಂಕಿಗೆಷ್ಟು 
ಹಸಿವಿರಬಹುದು.

ಇದ್ದ ಬಿದ್ದ ಬೆಳಕ,
ಹರಿದ ಮುರಿದ‌ ಆಸೆಗಳ,
ನುಂಗಬಲ್ಲ ಆ‌ ಕತ್ತಲಿಗೆಷ್ಟು,
ಹಸಿವಿರಬಹುದು.

ನಿಂತು, ನೀರವತೆಗೆ 
ಕಾಯ್ದು.‌ ಪುರಾವೆಗಳ 
ಹೆಕ್ಕಿ ತಿಂದು.
ನೆನಪುಗಳ ಅಳಿಸುವ,

ಆ ಮರೆವಿನ ಹಸಿವು 
ಹೆಚ್ಚೋ?

ಅಥವಾ, ಬೆಂಕಿ-ಬೆಳಕ, 
ಮರೆವಿನ‌ ಸೂರಲ್ಲಿ ಸಾಕಿ.
ಅವುಗಳ ಮೇಲೆ,
ರಾರಾಜಿಸುವ..

ಆ‌‌ ಕಾಲಚಕ್ರದ
ಹಸಿವು ದೊಡ್ಡದೋ?

14 February 2023

ಮರೆವು

ಉಕ್ಕಿ ಬಂದ 
ಹೃದಯದಲೆಗೆ,
ಕಡಲ ಉಸುಕು 
ಸವೆದಿದೆ.

ಹಾಲು-ಬೆಳಕ 
ಚೆಂದ ಇರುಳ,
ಕಪ್ಪು ಮೋಡ 
ಮುಸುಕಿದೆ.

ಹಾಯ್ದು ಹೋದ
ನೆನಪುಗಳೆಲ್ಲ
ಹಳೆ ಕಥೆಗಳ
ಕುಲುಕಲು.

ಮರೆಯಾಗಿದ್ದ,
ಕವಿತೆಗಳೆಲ್ಲ,
ಕಣ್ಣೀರಾಗಿ ಹೊರ 
ಹೊಮ್ಮಿವೆ.

13 February 2023

ವಿನಂತಿ

ಮಿಡಿ ನೆನಪ
ಬೊಗಸೆಯಲಿ.
ತಿಳಿ ಬೆಳಕ 
ಕನಸಲಿ ಹಿಡಿದು,
ನಿನ್ನರಸಿರುವೆ.

ಬಯಕೆಯ 
ಬೇಗೆಯಿಂದ 
ನೋಡೊಮ್ಮೆ.
ಕತ್ತಲಿನಾಚೆಯ,
ಕ್ಷಣವೊಂದ 
ಕದಿಯೋದಿದೆ.

ಪ್ರೀತಿಯ 
ಪಣತೆಯಲಿ
ಪ್ರಣಯದ ಹಣತೆ
ಉರಿಸಿ.
ಹೊಸ ಜೀವನಕೆ
ನಾಂದಿ 
ಹಾಡೋದಿದೆ.

07 February 2023

ನಗು

ತೆಂಕಣ ಗಾಳಿಯು
ಸುಯ್ಯೆಂದು ಬೀಸಿ,
ಚದುರಿದ ಮೋಡಗಳ
ಸೇರಿಸಿದೆ.

ಮೋಡಗಳೆಲ್ಲ ಸೇರಿ
ಒಟ್ಟಾರೆ ಗುಡುಗಲು,
ಮಳೆಯಾಗಿ ಕಿಸಿ-ಕಿಸಿ
ನಕ್ಕಿವೆ.

ತಣಿದ ನೆಲದಲಿ,
ಮೊಳಕೆಯೊಡೆದ
ಬೀಜವು, ಗಿಡವಾಗಿ 
ಸೆಟೆದು ನಿಂತಿದೆ.

ವಸಂತ ಬರಲು
ಅರಳಿದ ಮರಗಳು,
ಹೂವಾಗಿ ಕಿಸಿ-ಕಿಸಿ 
ನಕ್ಕಿವೆ.

ಸೊಬಗಿನ ಸೆಳೆತಕೆ,
ಮಾರುಹೋಗಿ
ಹಕ್ಕಿಗಳು, ರಾಗದಿ
ಹಾಡು ಹಾಡಿವೆ.

ಲಯವಾದ ಹಾಡು
ನಗುವಾಗಿ ಮುಗಿಲೇರಿ,
ಬೀಸುವ ಗಾಳಿಯ
ಸೇರಿದೆ.

ಬೀಸುತ ಬೀಸುತ
ಎಲ್ಲೆಡೆ ಹರಡಿ,
ಎಲ್ಲರ ಹಾಯಾಗಿ
ಮುದಿಸಿದೆ.

ಒಂದೆಡೆ ನಗುವ 
ಇನ್ನೊಂದೆಡೆ‌ ಹಬ್ಬಿ, 
ಗಾಳಿಯೂ ಕಿಸಿ-ಕಿಸಿ 
ನಕ್ಕಿದೆ.

ಅಮಲು

ಕನಸಿನ ಲೋಕಕೆ
ವಾಸ್ತವ ಸಿಲುಕಿ,
ಮಂಚಕೆ ರೆಕ್ಕೆ 
ಬಂದಿದೆ.

ಮೇಲಿಂದ ಕೆಳಗೆ
ಧೋಪ್ ಎಂದು 
ಬೀಳಲು, 
ನೌಕೆಯಾಗಿ ತೇಲಿದೆ.

ಅಂಬಿಗ‌ ತವಕದಿ
ಹುಟ್ಟನು ಹಾಕಿದ,
ನೀರೆಲ್ಲ ಹುಗ್ಗಿ
ಆಗಿದೆ.

ಹಬ್ಬದ ಊಟದ
ಬಯಕೆ ಹುಡುಗನಿಗೆ, 
ಅಮಲಿನಲೆ ಆಸೆ 
ನೀಗಿದೆ.

03 February 2023

ಸಂತೆ

ಮಾತುಗಳಿಲ್ಲದ,
ಮರುಭೂಮಿಯಲಿ
ಮೌನದ ಹೆಮ್ಮರ.

ಭಾವನೆಗಳಿಲ್ಲದ
ಬಯಲನಲಿ,
ಉದ್ವೇಗದ ಪರಿಮಳ.

ಮುಖಗಳೇ ಇಲ್ಲದ
ಜಾತ್ರೆ ಇದು,
ನಗುವೇ ಇಲ್ಲಿ ಅಪಸ್ವರ.

ಗಮ್ಯವಿಲ್ಲದ 
ದಾರಿಯಲ್ಲೇಕಿದೆ
ಇಷ್ಟೊಂದು ಗದ್ದಲ?

ಕಳೆದು ಹೋದವರ
ಸಂತೆಯಲಿ, ನಿಂತು 
ನಕ್ಕವನೇ ಜಂಗಮ.

21 December 2022

ಅಭಿವ್ಯಕ್ತಿ

ಒಂದು ಗುಂಜಿ
ಶಬ್ದರಾಶಿಗೆ, ಸಾವಿರ
ರುಪಾಯಿ ಅಂತೆ ಈಗೀಗ..

ಹಣದುಬ್ಬರದ ತಡೆಗೆ
ನಾಯಕರ ಆಶ್ವಾಸನೆ-
ಎಲ್ಲರ ಬಾಯಿಗೆ ಬೀಗ.

ಆರ್ಥಿಕ ಹಿನ್ನೆಡೆಗೆ
ಅಭಿವ್ಯಕ್ತಿಯೇ, 
ಕಾರಣವಂತೆ‌ 
ಸೂತ್ರಗಳ ಪ್ರಕಾರ.

ಕಣ್ಣೀರಿಡುವುದೂ
ದುಬಾರಿ ವ್ಯವಹಾರ.
ಈರುಳ್ಳಿ ಬೆಲೆ ಅದಕೆ
ಮುಗಿಲೇರಿದೆ ಈಗೀಗ.

15 December 2022

ಸಾಕ್ಷಿ

ಕುಂಟು ಆಸೆಗೆ,
ಎಂಟು ಸುಳ್ಳಿನ
ಸಾಕ್ಷಿ.

ಗುಂಟೆ ಜಮೀನಿಗೆ
ಹಂಡೆ ಸೊಕ್ಕಿನ 
ಸಾಕ್ಷಿ.
..
ಬಂಡ ಬದುಕಿಗೆ
ಅಂಟಿದ ಶನಿಯ
ಸಾಕ್ಷಿ.

ಇರಿದ ಹೋರಿಗೆ
ಹರಿದ ಕುಂಡಿ
ಸಾಕ್ಷಿ.
..
ತುಂಟ ಕವಿತೆಗೆ
ಮಿಂಡ ಗಂಡನ
ಸಾಕ್ಷಿ.

ಗಿಂಡಿ ಐಶ್ವರ್ಯಕ್ಕೆ
ತಂಟೆ ತಕರಾರಿನ
ಸಾಕ್ಷಿ.
..
ಜಗದ ಉಳಿವೇ
ಅರಿವಿನ ಮಾಯೆ.
ಅಳಿವು ಮರೆವಿನ
ಛಾಯೆ.

ನಾಲ್ಕಾಣೆ ಮನುಷ್ಯನ
ಎರಡಾಣೆ ಬದುಕಿನ
ಕ್ಷಣಿಕ ಶಾಶ್ವತೆಗೆ..

ನಶ್ವರ ಅನಂತವೇ
ಸಾಕ್ಷಿ.
..

12 November 2022

ಹರೆಯ

ತೊಳಲಾಟ,
ಹೊರಳಾಟ.
ಕೆರಳಿದ ಒಲವಿನ
ಕೂಗಿಗೆ..
ತರ್ಕಕ್ಕೆ ಸಿಗದ
ಸೆಣಸಾಟ.

ತೇಲಾಟ,
ತೂಗಾಟ.
ಹರೆಯ ಅಬ್ಬರಕ್ಕೆ 
ತತ್ತರಿಸಿ.
ಹಾರ್ಮೋನುಗಳ
ರಂಪಾಟ.

ನೂಕಾಟ,
ಪೀಕಲಾಟ.
ಜಿಗುಟಿನ ಈ
ಒಗಟು ಬಿಡಿಸಲು,
ಇಂದ್ರೀಯಗಳ
ದೊಂಬರಾಟ.

04 November 2022

ಭಾಸ

ದೂರದ ಊರಲ್ಲಿ
ಯಾರದೋ ಒಂದು
ನೋಟ ಕದ್ದ ಭಾಸ.

ಯಾವದೋ ಕಥೆಯ
ಕೊನೆಯ ಅಧ್ಯಾಯದ
ಮರೆತ ಗದ್ಯವಾದ ಭಾಸ.
..
ಮಾತುಗಳ ಬತ್ತಿದ
ಮರುಭೂಮಿಯಲಿ,
ಮೌನ ಬಿತ್ತಿದ ಭಾಸ.

ಮುಖಗಳೇ ಇಲ್ಲದ
ಜಾತ್ರೆಯಲಿ,
ಮುಖವಾಡವಾದ ಭಾಸ.
..
ಭಾವನೆಗಳ ಮರೆತ
ಬದುಕಿನಲಿ,
ಉದ್ವೇಗ ನೆಟ್ಟ ಭಾಸ.

ಪಾತ್ರಗಳೇ ಇಲ್ಲದ
ಕಪಟ ನಾಟಕದ, 
ನಿರೂಪಕನಾದ ಭಾಸ.
..
ಏನೋ ಪಡೆಯಲು
ಓಡಿ ಹೋಗಿ, ಸಿಗದೇ
ಸೋತು ನಿಂತ ಭಾಸ.

ಗಮ್ಯವೇ ಇಹದ
ಪಯಣದಲಿ.
ಮನೆ ಹುಡುಕುತ,

ನನ್ನಲಿ ನಾನೇ..
ಅಲೆಮಾರಿಯಾದ ಭಾಸ.
..

25 October 2022

ಕಾಲ ಚಕ್ರ

ಅಂಧಕಾರದಿ
ಬೆಳಕು ನುಗ್ಗಿದೆ.
ಹೊಸ ಆಸೆಗಳು
ಚಿಗುರಿವೆ.
ವಸಂತದ‌ ಕೋಗಿಲೆ
ಹಾಡು ಹಾಡಲು,
ಮುದುಡಿದ ತಾವರೆ
ಅರಳಿದೆ.

ಒಣಗಿದ ಮರ
ಉರುಳಿದೆ.
ಹೊಸದೊಂದು 
ಜೀವ ಹುಟ್ಟಿದೆ.
ಕನಸೊಂದು
ಕಣ್ಣ್ ತೆರೆಯಲು,
ಅನಂತವೇ,
ಅಂಗೈಯಲಿ ಸಿಕ್ಕಿದೆ.

ಮೊನ್ನೆ ತಾನೆ
ಸಣ್ಣವನಿದ್ದೆ.
ಕೂದಲೀಗ,
ಬಿಳಿಯಾಗಿವೆ.
ದಿನಗಳ ಕಳೆವುದು
ಕಷ್ಟವಾದರೂ,
ವರ್ಷಗಳು ಸರ್ರನೆ
ಜಾರಿವೆ.

ರಾತ್ರಿ
ಹನ್ನೆರಡಾಗಿದೆ.
ಪುಡಿ ನೆನಪುಗಳು
ಮರಳಿವೆ.
ಒಲವು ಮಳೆಯಲಿ 
ನೆನೆಯಲು,
ನೀರೆ, ಧಗ-ಧಗ‌ 
ಉರಿದಿದೆ.

24 October 2022

ಕಾಣದ ಕಡಲು

ಗುಲಾಬಿಗೆ, ಚಾಡಿ
ಹೇಳುವ ಬಯಕೆ.
ಕೇಳುವರಾರಿಲ್ಲ.

ಚಿಟ್ಟೆಗೆ,‌ 
ಕೇಕೆ ಹಾಕುವ ಆಸೆ.
ನಗುವರಾರಿಲ್ಲ.

ಕೋಗಿಲೆ ಹಾಡು
ಮರೆತು,‌ ಹಾರುವುದ
ಕಲೆತಿದೆ.

ಆನೆ‌ ಘೀಳಿಡುವುದ
ಬಿಟ್ಟು,
ಸರ್ಕಸ್ ಸೇರಿದೆ.

ಕಾಣದ‌ ಕಡಲ
ಸೇರುವ ಆಸೆ 
ಎಲ್ಲರಿಗೂ..

ಕಡಲ ತೀರವೇ
ಬೇಸರವಾದ
ಬಡ್ಡಿಮಕ್ಳಿಗಿದೆಯಾ.. 

ನೌಕೆಯ ಸವಲತ್ತು?

ತಾಳ್ಮೆ

ತಿಳಿ‌ ಸಂಜೆಯ‌ ಮುಸುಕು
ಬಾನಿಗೇರಿದೆ.
ಸುತ್ತಿ ಸೋತು ಧೂಳು
ಎಲೆಗಳ ಮುತ್ತಿದೆ.

ಹಲ್ಲಿನ ಬಿಗಿತವ,
ಉಸಿರಿಗೂ ತಿಳಿಸದೆ.
ಅಚಲ ಹಿಡಿತದಿ,
ಮರೆಯಲ್ಲಿ ಕುಳಿತಿದೆ.

ಹುಲಿ, ಬೇಟೆಗೆ
ಕಾಯುತಿದೆ.

ಹಸಿದ ಕಂಗಳಲ್ಲಿ
ಕೋಪ ಕುದಿಯುತಿದೆ.
ಕಾಯುದೊಂದೆ ಅದರ 
ತಲೆಯಲ್ಲಿದೆ.

ತಾಳ್ಮೆ, ಪಂಜಿಗಿಂತಲೂ,
ಮಾರಣಾಂತಿಕ ಎಂದು
ಅದಕೆ‌ ತಿಳಿದಿದೆ.

ಆಪತ್ತಿನ ನಿರೀಕ್ಷೆಯಲಿ,
ಕಾಗೆಗಳು ಶೆಟೆದು 
ಶಾಂತವಾಗಿವೆ.
ನಿಟ್ಟುಸಿರಿಗೆ,
ಸುತ್ತಲಿನ ನೊಣಗಳು,
ಬೆಂದು‌ ಬೆಂಡಾಗಿವೆ.

ದೂರದಲ್ಲೆಲ್ಲೋ,
ತೋಳವೊಂದು ಕೂಗುತಿದೆ.
ಪರಿಸ್ಥಿತಿಯ ಗಾಂಭೀರ್ಯ
ಅದಕ್ಕೆ ಮಾತ್ರ ತಿಳಿದಿದೆ.

ಬೇರಾವ ಪ್ರಾಣಿಗೂ,
ಪಿಸುಗುಡಲೂ ಧೈರ್ಯವಿಲ್ಲ.
ಇವತ್ತಿನ ರಾತ್ರಿಯೂಟಕ್ಕೆ
ಬೇಟೆ ಅವುಗಳಾಗ ಬೇಕಿಲ್ಲ.

ಜೀವ ಹೋಗುವ ಮುನ್ನವೇ,
ಸೂತಕದ ಛಾಯೆ ಆವರಿಸಿದೆ.
ರಣ-ಬೇಟೆಗಾರನ ಹಸಿವಿಗೆ
ಇಡೀ ಕಾಡೇ‌ ಶರಣಾಗಿದೆ.

23 October 2022

ಅವ್ವ

ಇವತ್ತು ಶನಿವಾರ.
ತಾನು ಉಪವಾಸ ಇದ್ದರೂ,
ಒಲೆ ಉರಿಸಿದಳು, 
ಅವ್ವ ರೊಟ್ಟಿ ಬಡೆದಳು.

ಮೊನ್ನೆ ಹುಷಾರಿರಲಿಲ್ಲ.
ಎದ್ದು ಕೂರಲಾಗದಷ್ಟು ಜ್ವರ.
ಆದರೂ ಹಿಟ್ಟು ನಾದಿದಳು.
ಪಲ್ಯ ಮಾಡಿದಳು.

ಕೆಲವು ತಿಂಗಳ ಹಿಂದೆ
ಅವಳ ಬೆಳ್ಳಿ ಹಬ್ಬ.
ಬಂಧುಗಳು, ಕೆಲವು ಆಪ್ತರು
ಹರಿಸಲು ಬಂದಿದ್ದರು.
ಉಡುಗೊರೆ ತಂದಿದ್ದರು.

ಔತನಕೂಟದ ಸಾರಥ್ಯ,
ಅವಳದೇ.
ಆವತ್ತೂ ರಜೆ ಸಿಕ್ಕಿರಲಿಲ್ಲ.
ಅನ್ನ ಬೇಯಿಸುವುದನ್ನು
ಮರೆತಿರಲಿಲ್ಲ.

ಹಬ್ಬ ಹರಿದಿನಗಳಲ್ಲಿ,
ಮದುವೆ, ಮುಂಜಿಗಳಲ್ಲೂ,
ಈ ರಗಳೆ ತಪ್ಪಿದ್ದಲ್ಲ.
ಅವಳ ಪಾಕಶಾಲೆಯಲಿ,
ಗೈರು ಹಾಜರಿಗೆ ಜಾಗವಿಲ್ಲ.

ನನ್ನನ್ನು ಹಡಿದಾಗಲೂ,
ಒಲೆ ಉರಿಸಿದ್ದಳಂತೆ.
ಅವಳು ಹುಟ್ಟಿದಾಗಲೂ ಅವಳೇ
ಅಡುಗೆ ಮಾಡಿದ್ದಳೇನೊ.

ಅಪ್ಪ ಬೈದಾಗಲೂ,
ನಾ ಸಿಟ್ಟಾದಾಗಲೂ.
ಅಜ್ಜಿ ಜೊತೆ ಜಗಳವಾದರೂ,
ಉಪ್ಪು ಜಾಸ್ತಿಯಾಗಲಿಲ್ಲ.

ಕಾರ್ಪೊರೇಟ್ ಕಟ್ಟಡಗಳು,
ಸ್ವಯಂಚಾಲಿತ ಯಂತ್ರಗಳು,
ಸ್ತ್ರೀವಾದಿ ಚಳುವಳಿಗಳು.
ಅಡುಗೆ ಮನೆ ಹೊಸ್ತಿಲು ದಾಟಿಲ್ಲ.
ಅವಳನ್ನ ತಡೆಯಲಾಗಿಲ್ಲ.

ಮಹಾ ಯುದ್ಧಗಳು,
ಪ್ರವಾಹ ಪ್ರಳಯಗಳೂ,
ಅವಳ ಸ್ಥಿರತೆಯನ್ನ
ಕುಗ್ಗಿಸಲಾಗಿಲ್ಲ.
ಅವ್ವ ಯಾರನ್ನೂ ಖಾಲಿ
ಹೊಟ್ಟೆಯಲಿ ಮಲಿಗಿಸಿಲ್ಲ.

ಮುಂದೊಂದು ದಿನ
ಅವಳು ಅಸುನೀಗಿದರೂ,
ಅವಳ ತಿಥಿ ಊಟ ಅವಳೇ 
ಮಾಡುವಂತಾದೀತೇನೊ.

ಬಹುಶಃ‌ ಜಗತ್ತಿಗೆ 
ನಮ್ಮವ್ವ ಉಣಬಡಿಸುವ 
ಕೊನೆಯ ಅಡುಗೆ ಅದೇ ಏನೋ.

15 October 2022

ಪಶ್ಚಾದರಿವು

ನೀರಡಿಕೆಯಲಿ ಹುಡುಕುತ 
ಹೋದ ಕೆರೆ, ಬತ್ತಿ ಹೋಗಿತ್ತು.
ಮುಂಚೆ ಕಂಡ ಮರೀಚಿಕೆ,
ನದಿಯಾಗಿತ್ತೆ?

ಆಸರೆ ಬಯಸಿ ತಲುಪಿದ
ಸೂರು, ಬಿದ್ದು ಹೋಗಿತ್ತು.
ತಿರಸ್ಕರಿಸಿ ಬಂದ‌ ಪಾಳು
ಮನೆಯಾಗಿತ್ತೆ?

ಅಂಟಿಕೊಂಡ‌ ದಾರಿದ್ರ್ಯ 
ಕಳೆಯಲು,
ನನ್ನಿಂದ ನಾನೇ ಓಡಿದೆ.
ಯಾರೂ ಕಾಣದ‌ ದೂರದ 
ಊರಲಿ, 
ಯಾರ್ಯಾರೋ ಸಿಕ್ಕರು.

ತ್ಯಜಿಸಿ ಬಂದ ಆ ಅಯೊಗ್ಯ 
ನಾನೇ ಆಗಿದ್ದೆನೆ?

14 October 2022

ಪೊಗರು

ಮುಗಿಲ ನೋಡುತ 
ಬೆಳೆದ ಹೂವು,
ಮಣ್ಣಿನ ವಾಸನೆ ಮರೆತಿದೆ.
ನೀಲಾಕಾಶದ ಜೊಳ್ಳು 
ಆಮಿಷಕೆ,
ಗಿಡದ ಹಂಗು ತೊರೆದಿದೆ.

ರೆಂಬೆ ಕೊಂಬೆಗಳೇ
ಪಂಜರ ವಾಗಿವೆ ಇದಕೆ.
ಅದ್ಯಾವ ಅಮಲಿನಲಿ 
ತೇಲುತಿಹುದೋ,
ದಳಗಳೇ ರೆಕ್ಕೆಗಳೆಂದು 
ತಿಳಿದಿದೆ.

ಬಾನ ಏರಿಗೆ, 
ಏಣಿ ಹಾಕಲು 
ಇಷ್ಟ ಇಲ್ಲ ಯಾರಿಗೆ?
ರೆಕ್ಕೆ ಇದ್ದರೂ ಸುಮ್ಮನಿಲ್ಲವೆ,
ಅದರ ಮಿತಿ‌ ತಿಳಿದ
ಕೋಳಿಯೆ?

ತನ್ನ ವಾಸನೆಗೆ ತಾನೇ
ಮಾರುಹೋದ,
ಕುಂಟು ಸೊಕ್ಕು ನಮ್ಮ
ಹೂವಿಗೆ.
ಮೀಸೆ ಬಂದಾಗ, 
ದೇಶ ಕಾಣದು.
ಮೊಲೆಯೂ ಬಂದಿದೆಯೇ?
ಈ ಲೌಡಿಗೆ.

12 October 2022

ಶೂನ್ಯ

ಮೌನಕ್ಕೆ ತಿಳಿದಿದೆಯೇ,
ಮಾತುಗಳ ರಗಳೆಯು.
ಬಿಳಿ ಹಾಳೆಗೆ ಪರಿಚಯವೇ,
ಅಕ್ಷರಗಳ ಬಿಗಿತವು.

ಕಿಡಿಯೊಂದರ ಕೆಚ್ಚನ್ನು
ಅಂಧಕಾರವು ಕಡೆಗಣಿಸಲು..
ಕಲ್ಲೊಂದರ ತವಕದಿ ಚದುರಿದೆ,
ಅಚಲ ಸಾಗರದ ಶಾಂತತೆಯು.

ಮನಸ್ಸೆಂಬ ಖಾಲಿ ಪಾತ್ರೆಯಲಿ 
ಕುಣಿದ, ಕುಂಟು ಕಲ್ಪನೆಯ ಆರ್ಭಟಕೆ..
ದೇವ ದಾನವರ ಅಸ್ತಿತ್ವವನ್ನೇ
ಹೊತ್ತಿದೆ, ನಂಬಿಕೆಯ ದಾರವು.

ಶೂನ್ಯಕ್ಕೆ ತಿಳಿದಿದೆಯೇ?
ಭಾವನೆಗಳ, ಈ ಹಾದರವು.

Gap in Your Name

Your parents fought hard to Settle on a common name for you After your birth. As a compromise your dad Prefixed you secretly after his ex. C...