23 October 2022

ಅವ್ವ

ಇವತ್ತು ಶನಿವಾರ.
ತಾನು ಉಪವಾಸ ಇದ್ದರೂ,
ಒಲೆ ಉರಿಸಿದಳು, 
ಅವ್ವ ರೊಟ್ಟಿ ಬಡೆದಳು.

ಮೊನ್ನೆ ಹುಷಾರಿರಲಿಲ್ಲ.
ಎದ್ದು ಕೂರಲಾಗದಷ್ಟು ಜ್ವರ.
ಆದರೂ ಹಿಟ್ಟು ನಾದಿದಳು.
ಪಲ್ಯ ಮಾಡಿದಳು.

ಕೆಲವು ತಿಂಗಳ ಹಿಂದೆ
ಅವಳ ಬೆಳ್ಳಿ ಹಬ್ಬ.
ಬಂಧುಗಳು, ಕೆಲವು ಆಪ್ತರು
ಹರಿಸಲು ಬಂದಿದ್ದರು.
ಉಡುಗೊರೆ ತಂದಿದ್ದರು.

ಔತನಕೂಟದ ಸಾರಥ್ಯ,
ಅವಳದೇ.
ಆವತ್ತೂ ರಜೆ ಸಿಕ್ಕಿರಲಿಲ್ಲ.
ಅನ್ನ ಬೇಯಿಸುವುದನ್ನು
ಮರೆತಿರಲಿಲ್ಲ.

ಹಬ್ಬ ಹರಿದಿನಗಳಲ್ಲಿ,
ಮದುವೆ, ಮುಂಜಿಗಳಲ್ಲೂ,
ಈ ರಗಳೆ ತಪ್ಪಿದ್ದಲ್ಲ.
ಅವಳ ಪಾಕಶಾಲೆಯಲಿ,
ಗೈರು ಹಾಜರಿಗೆ ಜಾಗವಿಲ್ಲ.

ನನ್ನನ್ನು ಹಡಿದಾಗಲೂ,
ಒಲೆ ಉರಿಸಿದ್ದಳಂತೆ.
ಅವಳು ಹುಟ್ಟಿದಾಗಲೂ ಅವಳೇ
ಅಡುಗೆ ಮಾಡಿದ್ದಳೇನೊ.

ಅಪ್ಪ ಬೈದಾಗಲೂ,
ನಾ ಸಿಟ್ಟಾದಾಗಲೂ.
ಅಜ್ಜಿ ಜೊತೆ ಜಗಳವಾದರೂ,
ಉಪ್ಪು ಜಾಸ್ತಿಯಾಗಲಿಲ್ಲ.

ಕಾರ್ಪೊರೇಟ್ ಕಟ್ಟಡಗಳು,
ಸ್ವಯಂಚಾಲಿತ ಯಂತ್ರಗಳು,
ಸ್ತ್ರೀವಾದಿ ಚಳುವಳಿಗಳು.
ಅಡುಗೆ ಮನೆ ಹೊಸ್ತಿಲು ದಾಟಿಲ್ಲ.
ಅವಳನ್ನ ತಡೆಯಲಾಗಿಲ್ಲ.

ಮಹಾ ಯುದ್ಧಗಳು,
ಪ್ರವಾಹ ಪ್ರಳಯಗಳೂ,
ಅವಳ ಸ್ಥಿರತೆಯನ್ನ
ಕುಗ್ಗಿಸಲಾಗಿಲ್ಲ.
ಅವ್ವ ಯಾರನ್ನೂ ಖಾಲಿ
ಹೊಟ್ಟೆಯಲಿ ಮಲಿಗಿಸಿಲ್ಲ.

ಮುಂದೊಂದು ದಿನ
ಅವಳು ಅಸುನೀಗಿದರೂ,
ಅವಳ ತಿಥಿ ಊಟ ಅವಳೇ 
ಮಾಡುವಂತಾದೀತೇನೊ.

ಬಹುಶಃ‌ ಜಗತ್ತಿಗೆ 
ನಮ್ಮವ್ವ ಉಣಬಡಿಸುವ 
ಕೊನೆಯ ಅಡುಗೆ ಅದೇ ಏನೋ.