ಸುಯ್ಯೆಂದು ಬೀಸಿ,
ಚದುರಿದ ಮೋಡಗಳ
ಸೇರಿಸಿದೆ.
ಮೋಡಗಳೆಲ್ಲ ಸೇರಿ
ಒಟ್ಟಾರೆ ಗುಡುಗಲು,
ಮಳೆಯಾಗಿ ಕಿಸಿ-ಕಿಸಿ
ನಕ್ಕಿವೆ.
ತಣಿದ ನೆಲದಲಿ,
ಮೊಳಕೆಯೊಡೆದ
ಬೀಜವು, ಗಿಡವಾಗಿ
ಸೆಟೆದು ನಿಂತಿದೆ.
ವಸಂತ ಬರಲು
ಅರಳಿದ ಮರಗಳು,
ಹೂವಾಗಿ ಕಿಸಿ-ಕಿಸಿ
ನಕ್ಕಿವೆ.
ಸೊಬಗಿನ ಸೆಳೆತಕೆ,
ಮಾರುಹೋಗಿ
ಹಕ್ಕಿಗಳು, ರಾಗದಿ
ಹಾಡು ಹಾಡಿವೆ.
ಲಯವಾದ ಹಾಡು
ನಗುವಾಗಿ ಮುಗಿಲೇರಿ,
ಬೀಸುವ ಗಾಳಿಯ
ಸೇರಿದೆ.
ಬೀಸುತ ಬೀಸುತ
ಎಲ್ಲೆಡೆ ಹರಡಿ,
ಎಲ್ಲರ ಹಾಯಾಗಿ
ಮುದಿಸಿದೆ.
ಒಂದೆಡೆ ನಗುವ
ಇನ್ನೊಂದೆಡೆ ಹಬ್ಬಿ,
ಗಾಳಿಯೂ ಕಿಸಿ-ಕಿಸಿ
ನಕ್ಕಿದೆ.