ಕೆರೆಯ ಅಛಲ
ಸ್ಥಿರತೆಯ ಮೇಲೆ,
ಖಾಲಿತನದ ಮಂಕು
ನಿರ್ವಾತ.
ಇಲ್ಲಿ ಪಕ್ಷಿಗಳು
ಹಾರುವಂತಿಲ್ಲ.
ಕಲ್ಲುಗಳು ಬೀಳುವಂತಿಲ್ಲ.
ಹಾಡುಗಳಿಗಿಲ್ಲಿ,
ಉಳಿಗಾಲವಿಲ್ಲ.
ಖಾಲಿ ಹಾಳೆಯ
ಬಿಳಿ ಇದಲ್ಲ.
ಬರೆಯುವುದು,
ಚಿತ್ರ ಬಿಡಿಸುವುದು,
ಇಲ್ಲಿ ಸಾಧ್ಯವಿಲ್ಲ.
ತನ್ನ ಮೇಲೆ
ತಾನೇ ಏರಿ,
ಬಿಗಿತವ ಹೆಚ್ಚಿಸಿ,
ಇದು ವಾಸ್ತವತೆಯ
ತಿನ್ನುತ್ತದೆ.
ಬಹಳ ಸಲ
ಬಣ್ಣಗಳಿಲ್ಲಿ ಬಂದು
ಸಾಯುತ್ತವೆ.
ಕೆಲವೊಮ್ಮೆ ಇದು
ಕತ್ತಲಾಗಿ ಕವಿದರೆ.
ಮತ್ತೊಮ್ಮೆ ನೀಳ
ನೀರವತೆಯಾಗಿ
ಹಬ್ಬುತ್ತದೆ.
ಅಸ್ತಿತ್ವವನ್ನೇ
ಕಬಳಿಸುವ ಮರೆವು
ಒಮ್ಮೊಮ್ಮೆ.
ಕುರುಡಾಗಿಸುವ
ಬೆಳಕಾಗುವುದಿದು
ಇನ್ನೊಮ್ಮೆ.
ನಿದ್ದೆ ಬರದ ಆ
ಸತ್ತ ರಾತ್ರಿಗಳಂದು,
ಮಾತಿಲ್ಲದೆ,
ಹಾಸಿಗೆಯ ಮೇಲೆ
ಅತ್ತಿಂದಿತ್ತ ಹೆಣವಾಗಿ
ಹೊರಳಾಡಿ,
ನಾನೂ, ನೀನೂ,
ಸೋತು ಶರಣಾದಾಗ,
ಖಾಲಿತನದ
ಈ ಶೂನ್ಯತೆಯ,
ಆಕರವಾಗುತ್ತೇವೆ.