Showing posts with label Kannada. Show all posts
Showing posts with label Kannada. Show all posts

28 May 2018

ಪಗಡೆಯಾಟ

ಕರ್ಣನಾದರೇನು, 
ಅರ್ಜುನನಾದರೇನು?

ಕೃಷ್ಣ ಶಕುನಿಯ 
ಆಟದಲಿ, ನೀನು 
ಭೀಷ್ಮನಾದರೇನು?

ಪಗಡೆಯಾಟದ 
ಪ್ರವಾಹದಲಿ, ನೀನು 
ಈಜಿ ಜಯಿಸಿದರೂ,

ಬೇರೆಲ್ಲವನ್ನು 
ಕಳೆದುಕೊಂಡ 
ನೆರೆ ಸಂತ್ರಸ್ತ.

07 March 2018

ಸತ್ಯ

ನೀ ನೋಡಿದ್ದು,
ನೀ ಕೇಳಿದ್ದು, 
ಮೂಸಿದ್ದು-

ನಿನ್ನ 
ಬೇಧ ಭಾವಗಳ
ರಾಡಿಯಲ್ಲಿ 
ಒದ್ದೆಯಾಗದೆ,

ನಿನ್ನ ಸೀಳು 
ವಿಚಾರಗಳ ನಡುವೆ
ಹಿಂಡಿ ಹಿಪ್ಪೆಯಾಗದೆ,

ನಿನ್ನ ಕೆಂಡದಂತ 
ಸೊಕ್ಕಿನಿಂದ
ಬೆಂದು ಬೆಂಡಾಗದೆ-

ಸಂದರ್ಭದ ಲಾಭ 
ಪಡೆಯದೇ
ಹೊರಬಂದರೆ....

ಅದು "ಸತ್ಯ".

23 February 2018

ಅರುಣ

ಸುಖ, 
ಮಂದರ ಪರ್ವತವಾದರೆ,
ದುಃಖ 
ವಿಷ್ಣುವಿನ 
ವಾಸುಕಿ ನಾಗ.

ಕಷ್ಟ ಸುಖಗಳ 
ಮಂಥನವೇ ಜೀವನ.
ನೀನು ಮಂಥನದ 
ಆಧಾರ, ಕೂರ್ಮ.

ಪಡೆದ ವಿಷವ 
ಶಿವನಿಗೆ ಬಿಡು.
ಅಮೃತವನ್ನು 
ದಾನವನಿಗೆರೆವೆಯೊ,
ನಿನ್ನಲ್ಲಿನ ದೈವಕ್ಕೆರೆವೆಯೊ 
ನಿನಗೆ ಬಿಟ್ಟದ್ದು.

ನೀನೆ ನಿನ್ನ 
ಸೂರ್ಯೋದಯದ
ಅರುಣ.

27 April 2016

ಕೇಳಲಾಗದ ಪ್ರಶ್ನೆ. ತಿಳಿಯಲಾಗದ ಉತ್ತರ.

ನೀನಾವ 
ಕವಿತೆಯ ಸಾಲೊ?
ಯಾವ 
ಹಾಡಿನ ಪ್ರಾಸವೊ?

ಮನದಲ್ಯಾವಗಲೂ 
ನೀ ಗೊಣಗಿದರು,
ಇನ್ನೂ ಪ್ರಶ್ನಾರ್ಥಕ 
ನಿನ್ನರ್ಥ.

ಯಾವ ಒಗಟೊ?
ಯಾವ ರಹಸ್ಯವೊ? 
ನಾ ಕಾಣೆ.
ಬಿಡಿಸಿದಷ್ಟು ತೊಡಕು.
ತಿಳಿದುಕೊಂಡಷ್ಟು 
ಗಾಢ, ಈ ಒಲವು.

ನಾ ಮಾತನಾಡ 
ಬಯಿಸಿದ 
ಗುಡ್ಡದ ಗಾಳಿಯೊ?
ಆಲಿಸಲೆತ್ನಿಸಿದ 
ಕಣಿವೆಯ ಮೌನವೊ?

ಶಬ್ದಗಳಿಂದ ಹಾಳಾಗಿ,
ಶೂನ್ಯತೆಯಲ್ಲಿ 
ಮುಳುಗಿರುವೆ.

ಕಾಲ ಗರ್ಭದಲಿ 
ಕಳೆದುಹೋದ
ನೀ, ನನಗಾರು; 
ನಾ ನಿನಗಾರೆನಿಸಿದರೂ,

ನನ್ನ ತರ್ಕಹೀನ 
ಭಾವನೆಗಳಿಗೆ 
ನೀನೊಂದು ಉತ್ತರ,

ಕೆಲವು ಸಮಂಜಸ 
ತಿಳುವಳಿಕೆಗಳಿಗೆ 
ನಿಲುಕಲಾರದ 
ಪ್ರಶ್ನೆ.

16 February 2016

ನನ ಹುಡುಗಿ

ಹುಬ್ಬಳ್ಳಿಯ 
ಹೂಬಳ್ಳಿ
ನನ ಹುಡುಗಿ.

ಹೂವಿನಷ್ಟು 
ಕೋಮಲವೇನಲ್ಲ,
ಬಳ್ಳಿಯಷ್ಟು 
ಜಟಿಲವೇನಲ್ಲ.

ಹೇಳಿದರೂ, 
ತಿಳಿಯದವಳವಳು,
ಕೇಳಿದರೂ 
ಹೇಳದವನು, ನಾನು.

ಅವಳು ಕಿವುಡಿ, 
ನಾನು ಮೂಕ.
ನಮ್ಮ ಪ್ರೀತಿ,
ಎಂದೂ ಮುಗಿಯದ 
ಮೌನ.

ಎದೆಯಾಳವನ್ನು 
ಮೀಟಿ,
ಮಾತಾಡದೆ 
ದೂರವಿದ್ದರೂ,

ಧಾರವಾಡದ 
ಮೂರು ಸಂಜಿಯ
ತಂಗಾಳಿಯಂತೆ, 
ನನ್ನನ್ನಾವರಿಸಿಹಳು...

18 January 2014

ಮೌನ

ಮನದಾಳದ ಮಾತೊಂದು ಹೊರಬರುವಾಗ,
ನಿನ್ನ ಹೃದಯಕ್ಕೆಡವಿ ಗಂಟಲಲ್ಲೇ ಇಂಗಿಹೋಗಿದೆ.

ಕಣ್ಗಳಿಂದ ಹೊರಹೊಮ್ಮಲ್ಲಿದ್ದ ಭಾವೋದ್ವೇಗದ ನೋಟವೊಂದು
ನಿನ್ನ ನೋಟಕ್ಕೆ ತಾಗಿ, ಕಣ್ಣ ರೆಪ್ಪೆಗಳಲಿ ಮುದುಡಿಹೋಗಿದೆ.

ಏಕಾಂತದಲ್ಲಿ ಮೂಡಿದ ಎಷ್ಟೋ ಭಾವನೆಗಳು, ನಿನ್ನನ್ನೆದುರಿಸದೆ,
ಬೇರಾವೋ ಮಾತುಗಳ ಕಂಬಳಿಯಲ್ಲಿ ಮುಸುಕು ಹಾಕಿವೆ.

ಪ್ರಸ್ತಾಪಿಸಬೇಕೆಂದು ಎನ್ನ ಹೃದಯ ಪುಟಿದೆಬ್ಬಿಸಿದ ಭಾವ,
ನಿನ್ನ ಸ್ನೇಹ ಕಳೆದುಕೊಂಡೀತೆಂದು ಬೆಂದು ಮೂಲೆಯಲ್ಲಡಗಿದೆ.

ಮನದಾಳದ ಆ ಮಾತು ಎಡವಿ ಹೊರಬರುವಾಗ,
ಕಳವಳದ ತೀರದಲ್ಲಿದ್ದ ಎನಗೆ
ಕೈಬೀಸಿ, ಬದುಕಿನ ತಿರುವಿನಲಿ ನೀ ಮರೆಯಾದೆ.

ಜಾತ್ರಿ

Gap in Your Name

Your parents fought hard to Settle on a common name for you After your birth. As a compromise your dad Prefixed you secretly after his ex. C...