ಜಗುಲಿಯಲಿ
ಮೈತಾಗಿ ಹುಟ್ಟಿದ ಒಲವೋ.
ಇರುಳ ತಂಪಿನಲಿ,
ದೆವ್ವಗಳ ಅಣಕಿಸಿ,
ಪಿಸುಗುಟ್ಟ ಸಲುಗೆಯೊ?
ಜಿಗಿ ಜಿಗಿದು
ಹಿತ್ತಲ ಹಾಳು ಮಾಡಿದ
ಮಂಗನ ಮೇಲಿನ,
ಜಂಟಿ ವೈರತ್ವವೂ
ಇರಬಹುದು.
ಗಿಡದ ದೈತ್ಯಾಕಾರಕ್ಕೆ,
ಹೂವು ಹೆದರಿಲ್ಲ.
ಒಂದು ಸಾರಿಯೂ
ಅದರ ಮೇಲೆ,
ಕಾಯಿ ಬೀಳಲಿಲ್ಲ.
ಪ್ರೀತಿಯೋ..
ಸ್ನೇಹವೋ..
ಒಂದು ಕಾಕತಾಳೀಯ
ಬೇಕೆಂಬ ಊಹೆಯೋ.
ಒಟ್ಟು, ಹಿತ್ತಲಿನ
ಬಟ್ಟಲ ಹೂವಿಗೂ,
ಗಿಡದಲ್ಲಿನ ತೆಂಗಿಗೂ,
ಏನೋ ಒಂದು
ನಂಟು..
ಚಳಿಗಾಲ ಶುರುವಾಗಿದೆ
ನಡೆಯಿರಿ,
ಹಾಕೋಣ ಅವುಗಳಿಗೆ
ಗಂಟು.