31 March 2022

ಮನೆ

ಸರಿ ತಪ್ಪುಗಳಾಚೆ
ಒಂದು ಮನೆಯಿದೆ.

ಅಲ್ಲಿ,
ಕಪ್ಪಲ್ಲದ ಬಿಳುಪಲ್ಲದ
ಅಡ್ಡ ದಾಟಿದರೆ,
ಅಪಶಕುನವಲ್ಲದ
ಒಂದು ಬೆಕ್ಕಿದೆ.

ಇಲ್ಲ ಸಲ್ಲದ ಟೀಕೆಗಳಿಗೆ
ಒಗ್ಗದ, ಬಗ್ಗದ.
ಬಟ್ಟೆ ಬಂಗಾರದ
ವಾಸನೆಗೆ ಮಾಗಿ,
ಬೊಗಳದ ನಾಯಿ ಇದೆ.

ಇಹ ಪರರರ
ಹಂಗು ತೊರೆದು.
ಹಗಲು ರಾತ್ರಿಗಳು 
ಸೇರಿ ನಕ್ಕ ತಿಳಿ‌ ಸಂಜೆಯ 
ಒಂದು ನೆನಪಿದೆ.

ಕೇಸರಿ‌ ಹಸಿರಿಗೆ
ಸಾಂತ್ವನ ಹೇಳಲು
ಬಿಳಿ‌ ಇದೆ.

ಇರಿಸು ಮುನಿಸು,
ಛಲ‌ ಕಪಟ,
ಕೋಪ ತಾಪಗಳ,
ತೆಲೆ‌ ಸವರಿ ಮಲಗಿಸಲು,
ಕುಳಿತು ಕೇಳುವ
ಕಿವಿಗಳಿವೆ.

ಕನಸಿದೆ, ನನಸಿದೆ,
ಮನಸಿದೆ.
ಮಸನ‌ ಮಂದಿರಳಾಚೆ
ಹರಿದ ಹಸಿವಿಗೆ,
ಒಂದೊತ್ತು ಹುಗ್ಗಿ,
ಇನ್ನೊಂದೊತ್ತು ಬಿರ್ಯಾನಿ
ಬಡಿಸಬಲ್ಲ,
ಅಡುಗೆಮನೆಯೂ 
ಇದೆ.

ಮಂಕು ಬುದ್ಧಿಯ,
ಡೊಂಕು ವಿಚಾರಗಳ
ಕಳಚಿ.
ಕಣ್ಣೊಳಗಿನ ಕಹಿ
ಪರದೆಯ ಸರಿಸಿ.
ಕುಳಿತು ಹರಟೆ ಹೊಡೆಯ 
ಬಲ್ಲೆಯಾದರೆ..

ಆಮಂತ್ರಣ..
ನಿನಗೂ ಇದೆ.