01 February 2022

ಕಾಳಿ ದೇವಿಗೆ ಮೂಗುದಾನ

ಎದ್ದು ಅಂಗಳ 
ತೊಳೆಯಲಿಲ್ಲ.
ತೆಲೆ ತೊಳೆದು ಜುಟ್ಟು 
ಕಟ್ಟಲಿಲ್ಲ.

ಬೊಟ್ಟು ಇಡಲಿಲ್ಲ. 
ಹೂ ಮುಡಲಿಲ್ಲ.
ಒಲೆಗೂ ಕೂಡ ರಜೆ.
ಇವತ್ತು ಅನ್ನ ಬೇಯೊದಿಲ್ಲ.

ಕಣ್ಣಲ್ಲಿ ಸೇಡಿಲ್ಲ.
ನೋವಿಲ್ಲ, ನಗುವಿಲ್ಲ.
ಸಾವಿರಾರು ವರ್ಷಗಳ
ದಬ್ಬಾಳಿಕೆಯ ಜ್ಞಾನವಿಲ್ಲ.
ನೆಪವೂ ಇಲ್ಲ.

ಆದರೂ
ಎದೆಯಲೊಂದು
ಅಳುಕಿದೆ.
ಮನದಲ್ಲಿ ಕವಿದ ಶೂನ್ಯ
ಜಗತ್ತನ್ನೇ ತಿನ್ನೆಂದು,
ನಗುತಿದೆ..

ಉಟ್ಟ ಸೀರೆಯ
ದಾಸ್ಯವ ತೊರೆದು,
ಸರಸರನೆ ಓಣಿಯಲ್ಲಿ
ಬೆತ್ತಲೆ ಓಡಿದಳು.

ಊರಿನ ಗುಡಿ
ಅದುರಿತು.
ಕೆರೆ ಒಡೆಯಿತು.
ಭೂಮಿ ಕಂಪಿಸಿತು.
ಸೂರ್ಯನಿಗೂ ಸ್ವಲ್ಪ
ಚಳಿ ತಾಗಿತು.

ಇಣುಕಿ ನೋಡಿದವರು,
ಕುರುಡರಾದರು.
ನಿಂತು‌ ನಕ್ಕ ಕೆಲ ಲೌಡಿಗಳು‌ 
ಸುಟ್ಟು ಬೂದಿಯಾದರು.

ಎವ್ವಾ! ಮುಕಳಿಗೆ
ನೀರೆಂದು ಮಗು
ಕರೆಯಿತು.
ವಾಸ್ತವ ರಪ್ಪನೆ
ಅಪ್ಪಳಿಸಲು,
ಒಲೆ ಹೊತ್ತಿತು.
ಊರು ಉಳಿಯಿತು.

ಆಗಿದ್ದೇನೆಂದು,
ದೇವ-ದಾನವರಿಗೆ ಮಾತ್ರ
ಗೊತ್ತಿತ್ತು.

ಪುರುಷ ಪ್ರಭುತ್ವವನ್ನು
ಉಳಿಸಲು,
ಮಗುವಾಗಿ ಬಂದಿದ್ದ
ಶಿವನಿಗೆ, ಅವರು  
ಕೈ ಮುಗಿದರು.