04 June 2018

ಯಾಕೋ ಮಮ್ಮಾಟ್ಯಾ?

ಪಿಂಟ್ಯಾ ನಮ್ಮತ್ತಿ ಮಗಾ. ಅವನ ಸಾಲ್ಯಾನ ಹೆಸರ್ ಅದೃಶ್, ಆದ್ರ ಅದ ಮಾಸ್ತರನ ಬಾಯಾಗ ಅಷ್ಟ ಚಲೊ ಕೇಳಸ್ತೇತಿ. ಮಸ್ತ ಹುಡ್ಗ, ಆದ್ರ ಬಾಳ್ ಉಡಾಳ. ಎಲ್ಲಾರು ಜೋಡಿ ಯಾವಾಗ ನೋಡಿದ್ರೂ ಮಷ್ಕಿರಿ ಮಾಡ್ಕೊಂತ ಅಡ್ಯಾಡೊ ಮನ್ಷ್ಯಾ. ‌‌ಸಣ್ಣಾವ ಇದ್ದಾಗಿಂದ ಹೈಸ್ಕೂಲ್ ಮುಗ್ಯೋತನಾ ನಮ್ ಮನ್ಯಾಗ ಇದ್ದಾ. ಒಂದ ಜಗ್ದಾಗ್ ಕುಂಡ್ರೊ ಮಗಾ ಅಲ್ಲ ಅವಾ. ಒಟ್ಟ್ ಏನಾರಾ ಕಿತಬಿ ಮಾಡಿ ಯಾವಾಗೂ ಸುದ್ಯಾಗ ಇರಾವ. ಅದ್ಕ ನಮ್ಮ ಓಣ್ಯಾಗ್ ದೊಡ್ಡಾವ್ರ ಜೋಡಿನೂ ನೆಚ್ಚರ್ಕಿ ಮಾಡ್ಕೋಂತ, ಬಾಳ್ ಸಲಗಿಲೆ ಇದ್ದಾ.

ಆ ವರ್ಷ, ನಾ ಕ್ರಿಸ್ಮಸ್ ಸೂಟಿಗ ಮನಿಗೆ ಬಂದಿದ್ನಿ. ಬಾಜು ಹೊಳಿ ಇದ್ದದ್ದಕ್ ಊರಾಗ ಥಂಡಿ ಬಾಳ. ಥಂಡ್ಯಾಗ ಒಂದ ಮಜಾ ಏನ್ ಅಂದ್ರ, ಹರ್ಯಾಗ್ ಎದ್ದ್, ಓಣ್ಯಾಗ್ ಬೆಂಕಿಹಚ್ಚಿ ಮೈ ಕಾಸ್ಕೋಂತ ನಿಲ್ಲೋದು. ಒಟ್ಟ್ ದಿನಾ ಯಾರ್ದಾರಾ ಮನಿ ಮುಂದ ಬೆಂಕಿ ಇರೋದ. ಬೆಂಕಿ ಇದ್ದಲ್ಲಿ ಹರ್ಟಿ ಹೋಡ್ಕೊಂತ್ ನಿಲ್ಲೋದ. ಅವತ್ತ್ ಬ್ಯಾರೆದವ್ರ ಯಾರೂ ಬೆಂಕಿ ಹಚ್ಚಿರ್ಲಿಲ್ ಅನಸ್ತೇತಿ, ನಮ್ ಹುಡ್ಗೋರ ಮನಿ ಬಾಜುಕಿನ ಲೈಟ್ ಕಂಬದ ಬಾಜು, ನಮ್ಮಜ್ಜಗ ಗೊತ್ತಾಗ್ದಂಗ, ಅಲ್ಲಲ್ಲಿದ ಕಬ್ಬಿನ ರೌಂದಿ, ಜ್ವಾಳದ ದಂಟ್ ಮತ್ತ್ ಹುಳ್ಳಿ ಹೊಟ್ಟ್ ತಂದ, ಕಸದ್ ಜೋಡಿ ಬೆಂಕಿ ಹಚ್ಚಿದ್ರ. ಪಿಂಟ್ಯಾ ನನ್ನೂ "ಏ ಮಾವ್, ಎದ್ದ್ ಬಾರೋ ಮಾರಾಯಾ" ಅನ್ಕೋಂತ ಎಬಿಸ್ಕೋಂಡ ಬಂದಾ. "ನಾವ್ ಮಾಡಿ ಬಿಟ್ಟಿದ್ದ ನೀವ್ ಮಾಡಾತೇರಿ ಬಿಡ್ರಿಲೇ" ಅನ್ಕೋಂತ ವಲ್ಲದ್ ಮನಸ್ಲೆ ಕಣ್ಣ್ ತಿಕ್ಕೋಂತ ನಾನೂ ಹೊರಗ್ ಬಂದ್ನಿ.

ಒಂದ್ ನಾಕ್ ಓಣ್ಯಾನ‌ ಹುಡ್ಗೋರು, ಮುಂದಿನ ಮನಿ ಅಜ್ಜಾ ಮತ್ತ್ ನಮ್ಮ್ ಹುಡ್ಗೋರು ನಕ್ಕೋಂತ ಸುತ್ತ ನಿಂತಿದ್ರು. "ಏನೊ ಯಜ್ಜಾ ಅರಾಮಾ?" ಅನ್ಕೊಂತ ಅವ್ರ್ ಗುಂಪನ್ಯಾಗ ಸೇರಿ, ಊರ್ ಸುದ್ದಿ ಕೇಳ್ಕೋಂತ, ನಕ್ಕೋಂತ ನಾನೂ ನಿಂತಬಿಟ್ನಿ. ಮುಂದಿನ ಮನಿ ಅಜ್ಜಾ ಯಾವಾಗೂ ಹುಡ್ಗೋರ್ ಜೊಡಿ ಹುಡ್ಗಾಟಾ ಮಾಡ್ಕೋಂತ‌ ಇರ್ತಿದ್ದಾ. ಅತ್ರಾಗೂ ಪಿಂಟ್ಯಾಂದು ಅಜ್ಜಾಂದು ಸ್ವಲ್ಪ ಜೋರ್ ದೋಸ್ತಿ.

ಎಳೆ ಆಗಿತ್ತು, ಬೆಂಕಿನೂ ನುಂದಾತಿತ್ತು. ಇನ್ನೇನ ಮನಿ ಒಳಗ ಹೊಂಟಿದ್ದು, ಅಷ್ಟೊತ್ತಿಗೆ ಅಜ್ಜಾ "ಯಾಕೋ ಮಮ್ಮಾಟ್ಯಾ, ಮುಕುಳಿ ಸಣ್ಣಗ ಕಡ್ಯಾತೇತಿ ಏನಾ, ನಮ್ಮ ಮನಿ ಹಂತೇಕ ಉಚ್ಚಿ ಹೋಯ್ಯಾತಿ" ಅಂತ‌ ಅಂದ. ಎಲ್ಲಾರು ಪಿಂಟ್ಯಾಗ ಅಸಹ್ಯ ಮಾಡ್ಕೋಂತ, ಅಜ್ಜಾನ ಜೋಡಿ ರಾಗಾ ಎಳ್ಯಾತಿದ್ದು, ಅಷ್ಟೊತ್ತಿಗೆ ಚಡ್ಡಿ ಉಡ್ದಾರ್ದಾಗ್ ಸಿಗಿಸ್ಕೋಂತ ಪಿಂಟ್ಯಾ ಅಂದಾ..."ಯಜ್ಜ್, ಯಾಕೋ ಗೊತ್ತಾಗವಾತ್ತ್, ಸ್ವಲ್ಪ ಕಿವಿ ಹಚ್ಚಿ ಕೇಳಿ ನೀನ ಹೇಳ್ಬಾಲಾ." ಅವ್ನೌನ್ ಏನ್ ಉತ್ತ್ರ ಪಾ ಅದು. ಎಲ್ಲಾರೂ ಕ್ಯಾಕಿ ಹೊಡ್ಕೋಂತ ನಕ್ರ. ಅಜ್ಜಗ ಸಿಟ್ಟ ಬಂದ್ರೂ ಅವ್ನು ನಗಾತಿದ್ದಾ. ಆದ್ರ ಪಿಂಟ್ಯಾ ಹಿತ್ತಲ್ಕ ಓಡಿದ್ದಾ. ಹುಡ್ಗೋರ್ ನಕ್ಕೋಂತ ಒಳಗ್‌ ನಡದ್ರು, ಅವ್ರ್ಗೊಂದ ನಗಾಕ ಹೊಸಾ ಕತಿ ಸಿಕ್ಕಿತ್ತ್. ಅಜ್ಜಾನೂ ಒಳಗ್ ನಡ್ದಾ, ಆವ ನಿಲ್ಲೊವಂಗಾ ಇರ್ಲಿಲ್ಲಾ.