Showing posts with label Kannada. Show all posts
Showing posts with label Kannada. Show all posts

01 October 2022

ಜುಗಲ್ಬಂದಿ

ಸುಡು ಬಿಸಿಲಿಗೆ
ಅಡ್ಡಲಾಗಿ ನಿಂತು..
ಮೂಡಿದ ನೆರಳನು,
ಸಂಜೆವರೆಗೂ
ವರ್ಧಿಸಿ, ತ್ವರಿತಗೊಳಿಸಿ,
ಆಕಾಶದ,
ಅನಂತಕ್ಕೆಸೆದವು..
ಚೊಗಚಿ‌ ಮರಗಳು.

ಬೆಳಗಾಗುತ್ತಿದ್ದಂತೆ.
ಬ್ರಹ್ಮಾಂಡದ 
ಆ ಕಡೆಯಿಂದ
ಉತ್ತರ ಬಂತು.

ತಿಳಿ ಮುಂಜಾವಿನಲಿ
ಸೆಟೆದು ನಿಂತ,
ಚೊಗಚಿ‌ ಮೇಲಿತ್ತು
ಕತ್ತಲೆಯ ಕಣ್ಣು.
ಮಧ್ಯಾಹ್ನನದ ವರೆಗೆ
ಮತ್ತೆ ಬಿಗಿಯಾಗಿತ್ತು,
ನೆರಳಿನ ವರ್ಚಸ್ಸು.

Translation of Recovery by
A R Ammons

28 September 2022

ನೆನಪುಗಳು

ಜೋಪಾನವಾಗಿ 
ಕಾಯ್ದಿರಿಸಿದ
ಸಿಹಿ ನೆನಪುನಳು 
ಕಹಿಯಾಗಿವೆ.

ರಾತ್ರಿ ಕರೆದ
ಕೆನೆ ಕೆನೆ ಕವಿತೆಗಳು,
ಹೆಪ್ಪಾಗಿವೆ.

ಅವಳ ನೆನಪುಗಳೇ 
ಹಾಗೆ.
ಮೈ ಮರೆಸಿ,
ಹುಳಿ‌ ಹಿಂಡಿ ಬಿಡುತ್ತವೆ.

ಅರೇಂಜ್ಡ್ ಮ್ಯಾರೇಜ್

ಅದು ದೇವರ 
ಜಗುಲಿಯಲಿ
ಮೈತಾಗಿ ಹುಟ್ಟಿದ ಒಲವೋ.

ಇರುಳ ತಂಪಿನಲಿ,
ದೆವ್ವಗಳ‌ ಅಣಕಿಸಿ,
ಪಿಸುಗುಟ್ಟ ಸಲುಗೆಯೊ?

ಜಿಗಿ ಜಿಗಿದು 
ಹಿತ್ತಲ ಹಾಳು ಮಾಡಿದ 
ಮಂಗನ ಮೇಲಿನ, 
ಜಂಟಿ ವೈರತ್ವವೂ 
ಇರಬಹುದು.

ಗಿಡದ ದೈತ್ಯಾಕಾರಕ್ಕೆ,
ಹೂವು ಹೆದರಿಲ್ಲ.
ಒಂದು ಸಾರಿಯೂ
ಅದರ ಮೇಲೆ,
ಕಾಯಿ ಬೀಳಲಿಲ್ಲ.

ಪ್ರೀತಿಯೋ..
ಸ್ನೇಹವೋ..
ಒಂದು ಕಾಕತಾಳೀಯ
ಬೇಕೆಂಬ ಊಹೆಯೋ.

ಒಟ್ಟು, ಹಿತ್ತಲಿನ 
ಬಟ್ಟಲ ಹೂವಿಗೂ,
ಗಿಡದಲ್ಲಿನ ತೆಂಗಿಗೂ,
ಏನೋ ಒಂದು 
ನಂಟು..

ಚಳಿಗಾಲ ಶುರುವಾಗಿದೆ
ನಡೆಯಿರಿ,
ಹಾಕೋಣ ಅವುಗಳಿಗೆ
ಗಂಟು.

14 June 2022

ದಾರಿ

ಆದಿಯೂ ಇಲ್ಲದೆ 
ಅಂತ್ಯವೂ ಇಲ್ಲದೆ,
ರಸ್ತೆಯೊಂದು,
ಅಂಕು ಡೊಂಕಾಗಿ
ಹಬ್ಬಿದೆ.

ಪಕ್ಷಿ‌ಯೊಂದು ಅದನ್ನು
ಮೇಲೆ ಕೆಳಗೆ
ಕರೆದೊಯ್ಯಬಯಸಿದರೆ.
ಬೀಸೋ ಗಾಳಿ
ಅತ್ತಿಂದಿತ್ತ ಎಳೆದಿದೆ.

ರಸ್ತೆ ಇದು ಎಲ್ಲಿಗೂ
ಹೋಗುವದಿಲ್ಲವೆಂದು,
ಸೆಟೆದು ನಿಂತ
ಗಿಡವೊಂದು ತಿಳಿದರೆ.

ಎಡ ಬಲ‌ಗಳ 
ಸಂದಿಯಲ್ಲಿ,
ದಾರಿ ಹುಡುಕುತ್ತಾ,
ಕಳೆದುಹೋಗಿದ್ದಾನೆ
ಮನುಜನೊಬ್ಬ.

ಅತ್ತ ಇತ್ತ, ಸುತ್ತ 
ನೋಡಿ, 
ದಿಕ್ಕು ಹುಡುಕುವ 
ದಾರಿಹೋಕರ 
ದಾಟಿಸಿ,
ಅಲ್ಲಿಯೇ ಉಳಿದರೂ,
ಪ್ರಯಾಣಿಸಿದ್ದು
ಆ ರಸ್ತೆಯೊಂದೆ.

ಅಲೆದಾಟದ 
ಮಾಯಾಬಜಾರಿನ
ಸುಳಿಯಲಿ ಅದೊಂದೇ
ಮುಕ್ತ.

01 April 2022

ಪ್ರೈವಸಿ

ತಿರಾರಿಲ್ಲದೆ ತಿಂದು.
ಕರಾರಿಲ್ಲದೆ‌ ಮಲಗಿ.
ಎಲ್ಲ ಕಾರುಬಾರುಗಳ
ಮುಂದೂಡಿ.
ಬಾಗಿಲ ಮುಚ್ಚದೇ
ಹೇತು.

ಬೆತ್ತಲೆ ಓಡಾಡುತ್ತಾ,
ಕುಡಿದು, ಸೇದಿ.
ನಾಲ್ಕಾರು ಬಾರಿ 
ಅಂಗೈಗೆ ತೀರ್ಥಯಾತ್ರೆ
ಮಾಡಿಸಿ.
ಪಾಪ ಪ್ರಜ್ಞೆಯಲ್ಲಿ,
ಇವನು ಕುಳಿತಿದ್ದಾನೆ.

ಯಾರೂ ಇಲ್ಲದ
ಮನೆಯಲ್ಲಿ, 
ಹೂಸು ಬಿಟ್ಟು,
ಕಳೆದು ಹೋದ ತನ್ನನ್ನು 
ಹುಡುಕುತ್ತಿದ್ದಾನೆ.

31 March 2022

ಮನೆ

ಸರಿ ತಪ್ಪುಗಳಾಚೆ
ಒಂದು ಮನೆಯಿದೆ.

ಅಲ್ಲಿ,
ಕಪ್ಪಲ್ಲದ ಬಿಳುಪಲ್ಲದ
ಅಡ್ಡ ದಾಟಿದರೆ,
ಅಪಶಕುನವಲ್ಲದ
ಒಂದು ಬೆಕ್ಕಿದೆ.

ಇಲ್ಲ ಸಲ್ಲದ ಟೀಕೆಗಳಿಗೆ
ಒಗ್ಗದ, ಬಗ್ಗದ.
ಬಟ್ಟೆ ಬಂಗಾರದ
ವಾಸನೆಗೆ ಮಾಗಿ,
ಬೊಗಳದ ನಾಯಿ ಇದೆ.

ಇಹ ಪರರರ
ಹಂಗು ತೊರೆದು.
ಹಗಲು ರಾತ್ರಿಗಳು 
ಸೇರಿ ನಕ್ಕ ತಿಳಿ‌ ಸಂಜೆಯ 
ಒಂದು ನೆನಪಿದೆ.

ಕೇಸರಿ‌ ಹಸಿರಿಗೆ
ಸಾಂತ್ವನ ಹೇಳಲು
ಬಿಳಿ‌ ಇದೆ.

ಇರಿಸು ಮುನಿಸು,
ಛಲ‌ ಕಪಟ,
ಕೋಪ ತಾಪಗಳ,
ತೆಲೆ‌ ಸವರಿ ಮಲಗಿಸಲು,
ಕುಳಿತು ಕೇಳುವ
ಕಿವಿಗಳಿವೆ.

ಕನಸಿದೆ, ನನಸಿದೆ,
ಮನಸಿದೆ.
ಮಸನ‌ ಮಂದಿರಳಾಚೆ
ಹರಿದ ಹಸಿವಿಗೆ,
ಒಂದೊತ್ತು ಹುಗ್ಗಿ,
ಇನ್ನೊಂದೊತ್ತು ಬಿರ್ಯಾನಿ
ಬಡಿಸಬಲ್ಲ,
ಅಡುಗೆಮನೆಯೂ 
ಇದೆ.

ಮಂಕು ಬುದ್ಧಿಯ,
ಡೊಂಕು ವಿಚಾರಗಳ
ಕಳಚಿ.
ಕಣ್ಣೊಳಗಿನ ಕಹಿ
ಪರದೆಯ ಸರಿಸಿ.
ಕುಳಿತು ಹರಟೆ ಹೊಡೆಯ 
ಬಲ್ಲೆಯಾದರೆ..

ಆಮಂತ್ರಣ..
ನಿನಗೂ ಇದೆ.

12 March 2022

ಜಂಗಮ

ಹೃದಯದ 
ಪಿಸು‌ ಮಿಡಿತದ
ಬಯಕೆ ಅಷ್ಟೇ 
ಪ್ರೇಮವೇ?

ಸಂಭೋಗದ 
ಜ್ವಾಲಾಗ್ನಿಯಲ್ಲಿ,
ಸಿಡಿದೆದ್ದ ಒಲವು..
ಕೇವಲ 
ವ್ಯಭಿಚಾರವೇ?

ಮನದಾಳ ಮೀಟಿ,
ಒಡಲಾಳ ಕಲುಕಿ,
ಕಾಲಿದ್ದರೂ ಓಡದ,
ಆದರ್ಶವ‌‌ 
ನೀವೇ ಇಟ್ಟುಕೊಳ್ಳಿ.

ಉಳ್ಳಾಗಡ್ಡಿ, 
ಬೆಳ್ಳೊಳ್ಳಿ ತ್ಯಜಿಸಿ.
ನಾವೇನು
ಶರಣರಾಗಬೇಕಿಲ್ಲ.

ಮೊಸರುಂಡ ನಿಮಗೆ,
ಬದನೆಕಾಯಿಯ ಚಪಲ 
ಶುರುವಾಗಿರಬಹುದು.

ಹೆಪ್ಪೇ ಕಾಣದ 
ನಮಗೆ ಸಾಕಾದೀತೆ?
ಅಂಟಾದ ಅಂಗೈಯ 
ಜಂಗಮ.

ಕೆರೆತ

ನಿನ್ನೊಳಗಿನ 
ಆ ಹತಾಶ ತುರಿಕೆಗೆ,
ಪಾರ್ಕಿನಲ್ಲಿನ,
ಪ್ರೇಮ ಸಂಜೆಗಳ,
ನೀ ಏಕೆ ಕೊಲ್ತಿ?

ಬರಿ, ಕೆರಿ,
ಇಲ್ಲ ನೆಲ ಗುದ್ದಿ 
ನೀರು‌ ತೆಗಿ.

ಕಜ್ಜಿ, ಅಷ್ಟೇ
ಜಾಸ್ತಿ ಆದರೆ,

ಕುರ್ಚಿ ಮೇಲೆ ಕುಳಿತ
ಆ ಹಂದಿಗೆ.
ಗುರಿಯಿಟ್ಟು ಒಂದು 
ಕಲ್ಲು ಎಸಿ.

ನಿಶಾನೆ ತಪ್ಪಿದರೂ
ಪರವಾಗಿಲ್ಲ.

ನಿನ್ನ ಸಕ್ರೀಯ 
ಕೆರೆತಕ್ಕಿದೆ ನನ್ನದೊಂದು 
ಸಲಾಮು.

01 March 2022

ಅಧಿಕಾರ

ನೇಗಿಲ ಹೂಡಿ,
ಅರಿವ ‌ಬಿತ್ತಿ,
ಕೊಯ್ಲು ಮಾಡಿ,
ತೂರಿ, ಸಾನಿಸಿ,
ವಿಚಾರ ವಾದದ
ಸುಗ್ಗಿ ಮಾಡಿಲ್ಲ.

ಎಷ್ಟು 
ದಿನಗಳಾಗಿವೆಯೊ,
ಸರ್ರನೆ ಗಾಳಿಗೆ,
ಮೈಯೊಡ್ಡಿ.
ಜೇಡ ಕಟ್ಟಿದ 
ಎದೆ‌ ಗೂಡಿಗೆ ಇದು
ಬೆಳಕ ತೋರಿಸಿಲ್ಲ.

ಕೈ ಕಾಲುಗಳ
ಕೀಲುಗಳಲ್ಲಿ ಜಂಗು.
ಹೊಳ್ಳೆಗಳಲ್ಲಿ ಗೆದ್ದಿಲು.
ಉಸ್ತುವಾರಿ ಇಲ್ಲದೆ,
ಸಂದು ಸಂದುಗಳಲ್ಲಿ,
ತುರಿಕೆ.

ದೇಹ ದೇಗುಲಕ್ಕೆ
ತಾನೇ ಕಳಶವೆಂಬ 
ಬೂಟಾಟಿಕೆ‌ ಬೇರೆ.
ಸರ್ಕಾರಿ ಬಾಬು ಹಾಗೆ
ಮೇಲೆ ಕುಳಿತಿದೆ.

ತಲೆಯಿದು,
ಹೇಲ‌ ಗಡಿಗೆ.

20 February 2022

ಮುಸ್ಸಂಜೆ

ಕಡಲ ಅಂಚು,
ಬಾನ ಕೆಂಪು,
ಸೇರಿ ಲಾಲಿ ಹಾಡಿವೆ..

ಹಕ್ಕಿ ಗುಂಪು
ರೆಕ್ಕೆ ಬಿಚ್ಚಿ,
ಪಡುವ ದಿಕ್ಕ ಏರಿವೆ.

ಬಾಲ ಚಂದ್ರ
ಮುಗಿಲ ಸೀಳಿ,
ಮೃದು ನಗೆಯ ಬೀರಲು..

ತಿಳಿ‌ ಸಂಜೆ
ಧರೆಯ‌ ತಬ್ಬಿ
ಹಬ್ಬದೂಟ ಬಡೆಸಿದೆ‌.

ಮನುಜನೊಬ್ಬ,
ತಾರೆ‌ ಬೆಳಕ,
ಬಯಸಿ ಕನಸ ಕಾಣಲು..

ಕವಿತೆಯೊಂದು,
ಹುಟ್ಟಿತಿಂದು,‌‌
ಇರುಳ ತಂಪು ಮಾಡಲು.

08 February 2022

ಅನಾಥ

ನೀರವ ಮೌನವ 
ಸೀಳಿ,
ಕತ್ತಲಲ್ಲಿ ಕತ್ತಿವರಸೆ
ನಡೆಸಿ,
ಕಿವಿಯ ಮೇಲೆ
ಕೆಂಡ ಕಾರುತ್ತಿದೆ
ಗಡಿಯಾರ.

ದೆವ್ವ ನೋಡಿ
ಬೆದರಿರಬಹುದು.
ಗುಂಪು ಗುಂಪಾಗಿ
ಕುಂಡಿ ಹರಿದ ಹಾಗೆ
ಒದರಿತ್ತಿವೆ,
ಬೀದಿ ನಾಯಿಗಳು.

ಹಗಲ-ಇರುಳುಗಳ 
ನಡುವಿನ
ನಿರ್ವಾತ ತುಂಬುತ್ತಾ.
ಲಗಾಮಿಲ್ಲದೇ 
ಅರಚುತ್ತಿವೆ,
ತಲೆಯಲ್ಲಿ ಹುಳುಗಳು.

ಪದೇ ಪದೇ ಕಣ್ಣು
ಪಿಳಿಕಿಸುತ್ತ.
ಹಾಸಿಗೆ ಉದ್ದಗಲ
ಅಳೆಯುತ್ತಾ.
ಅರೆ ಅಮಲಿನಲಿ
ನಾನೂ ಬಿದ್ದಿದ್ದೇನೆ..

ಅನಾಥ ಪದದ 
ಅರ್ಥವ, ಈ
ನಿದ್ರಾಹೀನ ರಾತ್ರಿಗಳಿಗೆ 
ಹೋಲಿಸುತ್ತ.

03 February 2022

ಬಂಡಾಯ ಮರೆತಿದ್ದೇನೆ.

ಈಗೀಗ ನಾನು
ಹೊಟ್ಟೆ ತುಂಬಾ 
ನಗುವುದಿಲ್ಲ.
ಬಿಕ್ಕಿ-ಬಿಕ್ಕಿ ಅಳುವುದಿಲ್ಲ.
ಬಂದುದನ್ನು ಎದುರಿಸಿ
ಎದೆ ಸೆಟೆದು,
ಮುನ್ನುಗ್ಗೋದಿಲ್ಲ.

ನಿಟ್ಟುಸಿರು ಬಿಟ್ಟು,
ಇರಿಯಲು ಹೋಗುತ್ತಿದ್ದ,
ಮನದ ಹೋರಿಯ 
ಹೆಡೆಮುರಿಗಟ್ಟಿ,
ಕುರ್ಚಿ ಮೇಲೆ 
ಕೂರಿಸಿ..

ಕಾಯಿಸಿ ಕೆರಳಿಸಿ,
ಸಿಡಿದು ಸೆನೆಸಾಡುವ,
ಅಂತರಾಳದ ಕಿಡಿಗೆ,
ನೀರೆರೆಚಿ, ಹೊಗೆ ಎಬ್ಬಿಸಿ,
ಕೆಮ್ಮತ್ತಾ..

ಟೀವಿ ನೋಡುತ್ತಾ,
ಫಳಾರು ತಿನ್ನುತ್ತಾ.
ಬೇಕಾಗದ, ಬೇಡಾಗಾದ,
ವಿದ್ಯಮಾನಳ,
ಅಪಹಾಸ್ಯ ಮಾಡುತ್ತ..

ಚಿಲ್ಲರೆ ಜೋಕುಗಳಿಂದ,
ಪ್ರಭಾವಿತನಾಗಿ,
ಅನ್ಯರಿಗೆ ಉಪದೇಶ
ಕೊಡುತ್ತ..

ಮಂಕು ತಲೆಯ,
ಮೊಂಡು ವಿಚಾರಗಳಿಗೆ,
ಸಾಣೆಕಲ್ಲು ತೋರಿಸದೆ,
ಕೊರಗುತ್ತಾ‌..

ಕೂತಿದ್ದೇನೆ.

ಈಗೀಗ ನಾನು
ಬಂಡಾಯ ಮರೆತಿದ್ದೇನೆ.

02 February 2022

ಕೆಮ್ಮು

ಅದು ತೆಂಕಣ ಗಾಳಿಯ 
ಅಮಲೋ.
ಒಡಲ ಮಂಥನದ
ಕಿಡಿಯೋ.

ತಲೆ ಏರಿ, ಎದೆ ಮೀಟಿ,
ತೊಡೆ ತಟ್ಟಿ
ಅಬ್ಬರಿಸಿದಾಗ,
ಮಾತು ಮರೆತಿದ್ದ
ಮಂದಿ ಎಲ್ಲಾ
ಕೆಮ್ಮಿದರು.

ಕೆಮ್ಮು. ಕೆಮ್ಮು.
ಭಯಂಕರ ಕೆಮ್ಮು.

ನಿಂತರೂ ಕೆಮ್ಮು.
ಕುಂತರೂ ಕೆಮ್ಮು.
ಎದ್ದರೂ ಕೆಮ್ಮು.
ಬಿದ್ದರು ಕೆಮ್ಮು.

ನಗುವನ್ನು ನುಂಗಿ
ಕ್ಯಾಕರಿಸಿದ ಕೆಮ್ಮು.
ಕರುಳ ಜಗ್ಗಿ
ಅಳಿಸಿದ ಕೆಮ್ಮು.

ಮಲಗಿದವರನ್ನು
ಗಾರಿ ಉಗುಳಲು
ಎಬ್ಬಿಸಿದ ಕೆಮ್ಮು.

ಎದ್ದವರನ್ನು ಕುಗ್ಗಿ
ನಡೆಸಲು,
ತಲೆ ತಟ್ಟಿದ ಕೆಮ್ಮು.

ಬೀಗಿ, ಬೈದು,
ಗೊಳೋ ಎಂದು ಅತ್ತು.
ತಲೆ ತಿಪ್ಪೆ
ಮಾಡಿಕೊಂಡರು
ಹಲವರು.

ಬಿತ್ತಿ, ಎತ್ತಿ,
ಕೆರೆ-ಕಟ್ಟೆ ಕಟ್ಟಿ,
ತಮ್ಮ ಕೆಮ್ಮಿಗೆ
ರಾಗ ಕೊಟ್ಟು,
ಕವಿಯಾದರು ಕೆಲವರು.

ಹೇಗೆ ಕೆಮ್ಮಬೇಕೆಂದು
ಹೇಳಿ ಕೊಡಲು ತಿಳಿದ
ಬಲ್ಲವರು
ಸ್ವಾಮಿಗಳಾದರು.

ಸ್ವಲ್ಪ ಜೋರಾಗಿ ಕೆಮ್ಮಿ,
ಆಶ್ವಾಸನೆ ನೀಡಿ.
ಕೆಮ್ಮನ್ನೇ ಬಂಡವಾಳ
ಮಾಡಿಕೊಂಡ‌ ಧುರೀಣರು‌  
ಸರ್ಕಾರ ಕಟ್ಟಿದರು..

ಕೆಮ್ಮನ್ನು 
ಹತೋಟಿಯಲ್ಲಿಡಲು.

01 February 2022

ಕಾಳಿ ದೇವಿಗೆ ಮೂಗುದಾನ

ಎದ್ದು ಅಂಗಳ 
ತೊಳೆಯಲಿಲ್ಲ.
ತೆಲೆ ತೊಳೆದು ಜುಟ್ಟು 
ಕಟ್ಟಲಿಲ್ಲ.

ಬೊಟ್ಟು ಇಡಲಿಲ್ಲ. 
ಹೂ ಮುಡಲಿಲ್ಲ.
ಒಲೆಗೂ ಕೂಡ ರಜೆ.
ಇವತ್ತು ಅನ್ನ ಬೇಯೊದಿಲ್ಲ.

ಕಣ್ಣಲ್ಲಿ ಸೇಡಿಲ್ಲ.
ನೋವಿಲ್ಲ, ನಗುವಿಲ್ಲ.
ಸಾವಿರಾರು ವರ್ಷಗಳ
ದಬ್ಬಾಳಿಕೆಯ ಜ್ಞಾನವಿಲ್ಲ.
ನೆಪವೂ ಇಲ್ಲ.

ಆದರೂ
ಎದೆಯಲೊಂದು
ಅಳುಕಿದೆ.
ಮನದಲ್ಲಿ ಕವಿದ ಶೂನ್ಯ
ಜಗತ್ತನ್ನೇ ತಿನ್ನೆಂದು,
ನಗುತಿದೆ..

ಉಟ್ಟ ಸೀರೆಯ
ದಾಸ್ಯವ ತೊರೆದು,
ಸರಸರನೆ ಓಣಿಯಲ್ಲಿ
ಬೆತ್ತಲೆ ಓಡಿದಳು.

ಊರಿನ ಗುಡಿ
ಅದುರಿತು.
ಕೆರೆ ಒಡೆಯಿತು.
ಭೂಮಿ ಕಂಪಿಸಿತು.
ಸೂರ್ಯನಿಗೂ ಸ್ವಲ್ಪ
ಚಳಿ ತಾಗಿತು.

ಇಣುಕಿ ನೋಡಿದವರು,
ಕುರುಡರಾದರು.
ನಿಂತು‌ ನಕ್ಕ ಕೆಲ ಲೌಡಿಗಳು‌ 
ಸುಟ್ಟು ಬೂದಿಯಾದರು.

ಎವ್ವಾ! ಮುಕಳಿಗೆ
ನೀರೆಂದು ಮಗು
ಕರೆಯಿತು.
ವಾಸ್ತವ ರಪ್ಪನೆ
ಅಪ್ಪಳಿಸಲು,
ಒಲೆ ಹೊತ್ತಿತು.
ಊರು ಉಳಿಯಿತು.

ಆಗಿದ್ದೇನೆಂದು,
ದೇವ-ದಾನವರಿಗೆ ಮಾತ್ರ
ಗೊತ್ತಿತ್ತು.

ಪುರುಷ ಪ್ರಭುತ್ವವನ್ನು
ಉಳಿಸಲು,
ಮಗುವಾಗಿ ಬಂದಿದ್ದ
ಶಿವನಿಗೆ, ಅವರು  
ಕೈ ಮುಗಿದರು.

18 November 2021

ರಾತ್ರಿ

ನಾನು ಕಣ್ಣು ಮುಚ್ಚಿದಾಗ,
ಕತ್ತಲಾಗುವದಿಲ್ಲಾ.
ನಿದ್ದೆ ಬರುವುದಿಲ್ಲ.
ಸೋತು ಶರಣಾಗಬೇಕಾದ,
ದೇಹ ಮಲುಗುವದಿಲ್ಲ.

ಮನೆಯ ಮಾಳಿಗೆ
ನನ್ನ ವೈಫಲ್ಯ ಮುಖಕ್ಕೆ,
ಕನ್ನಡಿಯಾಗುತ್ತದೆ.

ಅಂತರಾಳವ ಕೆರಳಿಸಲು,
ಗೋಡೆಗಳು ಪಿತೂರಿ
ಹೂಡುದುತ್ತವೆ.

ಕತ್ತಲಾಚೆಗೆ ಕರೆದೊಯ್ಯುವ
ಮಹದಾಷೆ ಆ ಫ್ಯಾನಿಗೆ..
ಕೈಮಾಡಿ ಕರೆಯುತ್ತದೆ.

ಮಂದ ಬುದ್ದಿಯ ಮನಸ್ಸಿನ,
ಕೈಗೆ ಹೂವಾದರೇನು?
ಕೊರಳಿಗೆ ನೂಲಾದರೇನು?
ರಾತ್ರಿಯಿಡೀ ಸಾಂತ್ವನ
ಹೇಳಬೇಕಾಗುತ್ತದೆ.

ಕಾಡ ಕತ್ತಲಿನ ನೀರವ 
ಮೌನದಲಿ, ಕೆಲವೊಮ್ಮೆ,
ಚಂದ್ರ, ನಕ್ಷತ್ರಗಳ 
ಮಿನುಗುವ ಕನಸುಗಳಿಗಿಂತ..

ಅತ್ತ ಇತ್ತ ಹೊರಳಾಡುತ್ತ,
ನಾನೇಕೆ ಉಸಿರಾಡಬೇಕೆಂಬ
ವಾಸ್ತವಿಕ ಪ್ರಶ್ನೆಗೆ ಉತ್ತರ
ಹುಡುಕುವುದೇ ದೊಡ್ಡ 
ಸಾಹಸವಾಗುತ್ತದೆ.

12 September 2021

ನಕ್ಕು ಬಿಡು

ತಿಳಿ ಸಂಜೆಗಳ 
ಕದ್ದು ತಿನ್ನಬಲ್ಲ
ತೀಕ್ಷ್ಣ ಕಣ್ಣುಗಳವು.

ಎಲ್ಲ ಮುಂಜಾವುಗಳ,
ಸವರಿ ಮಲಗಿಸುವ
ಮುದ್ದು ಕೈಗಳು.

ಸಮುದ್ರದಾಳದ
ತವಕ ಮೀಟುವ
ತುಂಟ ತುಟಿಗಳು.

ನಕ್ಷತ್ರದಾಚೆಗಿನ
ಬೆಳಕ ಭಕ್ಷಿಸುವ
ಮೋಹಕ ಕೆನ್ನೆಗಳು.

ಇಂದ್ರನೂ ನಾಚಿ
ನೀರಾದನಂತೆ..ಆಹಾ! 
ಅದೆಂತಾ ನಡುಗೆ..

ಬೇರೇನು ಬೇಕು
ನನ್ನಂತಹ ಹುಡುಗನ
ಕೊಲ್ಲಲು?

ನಕ್ಕು ಬಿಡು.

15 January 2019

ಕಲಹಗಳ ಕುರುಕ್ಷೇತ್ರ

ಬೆಳಕಿನ ಆಚೆಗೆ,
ಕತ್ತಲಿನ ಈಚೆಗೆ.
ಇಣುಕಿ ನೋಡು ನೀ,
ನಿನ್ನ ಅಂತರಾಳದಲಿ.

ಅತ್ತ ಕೌರವರು,
ಇತ್ತ ಪಾಂಡವರು.
ಮನಸ್ಸಿನೊಳಗಿಹುದು,
ಕಲಹಗಳ ಕುರುಕ್ಷೇತ್ರ.

ಮಹಾಭಾರತವೀ ಜೀವನ.
ನೀನೆ ಕೃಷ್ಣ,
ಈ ಕಪಟ ನಾಟಕದ
ಸೂತ್ರಧಾರಿ.

27 September 2018

ಅವಳು

ಅವಳು,
ಈ ಖಾಲಿ ಮನಸ್ಸು
ಹೊರಲಾರದ 
ದೈತ್ಯ ಹೊರೆ.

ಮಾಸಿದ ಗಾಯಗಳ 
ಮೇಲೆ
ತಂಗಾಳಿಯ ಬರೆ.

ಕಣ್ಣಲ್ಲಿ ಕಣ್ಣಿಟ್ಟು,
ತಿಳಿ ನಗೆಯೊಂದ ಬೀರಿ
ಕನಸಿನ ಚಂದಿರನ 
ತೋರಿಸಿ,
ಅಮಾವಾಸ್ಯೆಯ
ಕತ್ತಲನ್ನು ಕೈಗೆ
ಕೊಟ್ಟು ಮರೆಯಾದವಳು, 
ಅವಳು.

ನೆನಪುಗಳು 
ತರಗೆಲೆಗಳ ಗುಡಿಸಿ,
ಮರೆವಿನ 
ಗುಂಡಿಯಲೆಸೆದರೂ,

ಇವತ್ತಿಗೂ ಸಹ, 
ನನ್ನ ಸಪ್ಪೆ ಮುಖವ ನಾಚಿ 
ನೀರಾಗಿಸುವ
ಒಲವಿನ ಅಲೆ, 

ಅವಳು.

25 August 2018

ದೃಷ್ಟಿಕೋನ

ಕೇಳಿ ಕೇಳಿ 
ಕಿವುಡನಾದೆ,
ಮಾತನಾಡಿ 
ಮೂಕನಾದೆ.

ನೋಡಿ ನೋಡಿ 
ಅಂಧನಾದೇನೆಂದೆನಿಸಲು,
ದೃಷ್ಟಿಕೋನ 
ಬದಲಿಸಿದೆ.

ಓಹೋ! 
ಈಗ ಎಲ್ಲೆಡೆ,
ಗಿಡ ಮರ ಗುಡ್ಡಗಳು.
ಹಕ್ಕಿ ಹಾಡುಗಳು.

ಮತ್ತೆ ಚಿಗುರಿದ 
ಆಸೆಗಳು.
ಕಳೆದು ಹೋಗಿದ್ದ,
ಮಧುರ 
ಪಿಸುಮಾತುಗಳು.

20 August 2018

ದೆಹಲಿ ಹುಡುಗಿಯರು

ಸುತ್ತಲೂ 
ಬಣ್ಣ ಬಣ್ಣದ 
ಕೆನ್ನೆಗಳು,
ಬಳುಕು ನಡುಗೆಗಳು,
ಮಾದಕ ನೋಟಗಳು,
ಎದೆ ಪುಳಕಿಸುವ 
ಮೃದು ನಗೆಗಳು.

ಯಾರಾದರೂ 
ಹಾಕಬಾರದಿತ್ತೆ,
ಸೂಚನಾ 
ಫಲಕನೊಂದನು;

ಎಷ್ಟು ಹುಡುಗರನು 
ಬೀಳಿಸಿವೆಯೋ!
ಈ ತಗ್ಗು ದಿನ್ನೆಗಳು..


Gap in Your Name

Your parents fought hard to Settle on a common name for you After your birth. As a compromise your dad Prefixed you secretly after his ex. C...